ಮಾಗಧೀ
ಪ್ರಾಕೃತದ ಒಂದು ಉಪಭಾಷೆ. ಮೂಲತಃ ಮಗಧ ದೇಶದ ಜನರು ಆಡುತ್ತಿದ್ದ ಭಾಷೆ. ಈಗ ಈ ಭಾಷೆಯ ಕೆಲವು ಉದಾಹರಣೆಗಳು ನಾಟಕಗಳಲ್ಲಿ ಮುಖ್ಯವಾಗಿ ಗದ್ಯ ರೂಪದಲ್ಲಿ ಮತ್ತು ಕೆಲವೆಡೆ ಪದ್ಯರೂಪದಲ್ಲಿ ದೊರೆಯುತ್ತವೆ. ನಾಟಕಗಳಲ್ಲಿ ಕಾಣುವ ಮಾಗಧೀ ಮೂಲ ಮಾಗಧೀಯಿಂದ ಕೆಲವು ಅಂಶಗಳಲ್ಲಿ ಭಿನ್ನವಾಗಿರುವುದು ಸ್ವಾಭಾವಿಕ. ಶೌರಸೇನಿಯೊಂದಿಗೆ ತುಲನೆ ಮಾಡಿದಾಗ ಮಾಗಧೀ ಭಾಷೆಯಲ್ಲಿ ಕೆಲವು ವೈಶಿಷ್ಟ್ಯಗಳು ಕಂಡು ಬರುತ್ತವೆ. ಪುಲ್ಲಿಂಗ ಅಕಾರಾಂತ ಶಬ್ದಗಳ ಪ್ರಥಮಾ ಏಕವಚನ ಏಕಾರವಾಗುತ್ತದೆ. ರಕಾರ ಲಕಾರವಾಗುತ್ತದೆ. ಇಲ್ಲಿ ಒಂದೇ ಶಕಾರ ದೊರೆಯುತ್ತದೆ ಮತ್ತು ಷಷ್ಠೀ ಬಹುವಚನದಲ್ಲಿ ಅಕಾರಾಂತ ಬಹುವಚನಗಳ ರೂಪ ಅಹ ಎಂದಾಗುತ್ತದೆ. ಮುಖ್ಯವಾಗಿ ಶಾಕುಂತಲ, ಮುದ್ರಾರಾಕ್ಷಸ, ಮೃಚ್ಛಕಟಿಕ ಮೊದಲಾದ ಕಾವ್ಯಗಳಲ್ಲಿ ಮಾಗಧಿಯ ಸ್ವರೂಪವನ್ನು ಕಾಣಬಹುದು. ಮಾಗಧಿಯನ್ನು ಆಡುವ ಪಾತ್ರಗಳೆಂದರೆ ರಾಕ್ಷಸರು, ಕ್ಷಪಣರು, ಕಿರಾತರು, ಶಕಾರ, ಧೀವರ, ಭಿಕ್ಷು ಇತ್ಯಾದಿ ಪಾತ್ರಗಳು. ಈ ಭಾಷೆಯನ್ನು ಆಡುವ ಪಾತ್ರಗಳಲ್ಲಿ ಮೃಚ್ಛಕಟಿಕದೊಳಗಿನ ಶಕಾರನ ಪಾತ್ರ ಗಮನಾರ್ಹವಾದುದು. ಮಾಗಧಿಗೆ ಸಂಬಂಧಪಟ್ಟ ಮತ್ತೊಂದು ಪ್ರಾಕೃತ ಭಾಷೆಯೆಂದರೆ ಅರ್ಧಮಾಗಧೀ. 
 											(ಎ.ಎನ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ